ಯಾದಗಿರಿ:ಸೆ:13 : ಆತ್ಮಹತ್ಯೆ ಮಹಾಪಾಪ. ಇದು ಮಾಡಿಕೊಂಡವರು ತಮ್ಮ ಜೀವನ ಅಂತ್ಯ ಮಾಡಿಕೊಳ್ಳಬಹುದು, ಆದರೇ ಅವರ ಕುಟುಂಬ ಮತ್ತು ನಂಬಿದವರನ್ನು ಜೀವನ ಪರ್ಯಂತ ಗೋಳಾಟದಲ್ಲಿಯೇ ಇರುವಂತೆ ಮಾಡುತ್ತಾರೆ .ಕಾರಣ,ಎಂತಹ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಹೇಳಿದರು.
ನಗರದ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ(ಮಾನಸಿಕ ವಿಭಾಗ) ಯಾದಗಿರಿ ವತಿಯಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮಹತ್ಯೆಗೆ ಅನೇಕ ಕಾರಣಗಳು ಎದುರಾಗುತ್ತವೆ. ಮಾನಸಿಕ ಒತ್ತಡ, ಒಂಟಿತನ, ವೇದನೆ, ಕಷ್ಟ, ನಿರುದ್ಯೋಗ, ಸಂಸಾರಿಕ ಸಮಸ್ಯೆ, ವ್ಯಾಪಾರ ನಷ್ಟ ಹೀಗೆ ಹಲವಾರು ಕಾರಣಗಳಿಂದ ನೊಂದವರು ಈ ಕೆಲಸಕ್ಕೆ ಮುಂದಾಗುತ್ತಾರೆ. ಜೀವನದಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆಯೇ ಪರಿಹಾರ ಅಲ್ಲ. ಆತ್ಮವಿಶ್ವಾಸದಿಂದ ಬದುಕಲು ಕಲಿಯಬೇಕೆಂದರು.
ಬಡತನ ಮತ್ತು ಕಷ್ಟದಲ್ಲಿ ಇದ್ದು ಸಾಧನೆ ಮಾಡಿ ಮುಂದೆ ಬಂದವರನ್ನು ಗಮನಿಸಬೇಕು ಮತ್ತು ಅವರನ್ನು ಆದರ್ಶವಾಗಿ ಇಟ್ಟುಕೊಂಡು ಬದುಕಿದರೇ ಈ ಸಮಸ್ಯೆಯೇ ಎದುರಾಗುವುದಿಲ್ಲ ಎಂದು ನ್ಯಾಯಾಧೀಶ ಮರಿಯಪ್ಪ ಹೇಳಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿಸ್ತಪ್ಪ ಕಟ್ಟಿಮನಿ ಮಾತನಾಡಿ, ಕಷ್ಟಗಳು ಬರುವುದು ಮನುಷ್ಯರಿಗೆ ಮಾತ್ರ. ಅವುಗಳನ್ನು ಎದುರಿಸಿ ಮೆಟ್ಟಿ ನಿಲ್ಲಬೇಕೆಂದರು.
ಮನೋವೈದ್ಯರು, ಜಿಲ್ಲಾ ಮಾನಸಿಕ ಆರೋಗ್ಯ ಮನೋವೈದ್ಯರಾದ ಡಾ. ಅಮೀತ ಕುಮಾರ ಮಾತನಾಡಿ, ಜೀವನದಲ್ಲಿ ಹತಾಶರಾದವರು ವೈದ್ಯರನ್ನು ಕಂಡರೇ ಪರಿಹಾರ ನೀಡುತ್ತಾರೆಂದರು.
ವಕೀಲರಾದ ಡಿ.ಜಿ ಪಾಟೀಲ್, ಮಲ್ಲಿಕಾರ್ಜುನ ಮನಗನಾಳ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.

